ಜಾರಜ
-ನ್ಯಾಯಬದ್ಧವಾದ ವಿವಾಹಸಂಬಂಧವಿಲ್ಲದೆ ಜನಿಸಿದ ಶಿಶು (ಬಾಸ್ಟರ್ಡ್). ಇಂಗ್ಲಿಷ್ ನ್ಯಾಯದಲ್ಲಿ ಜಾರಜ ಶಬ್ಧವನ್ನು ಅರ್ಥೈಸಿದ ಕ್ರಮವನ್ನೇ ಭಾರತದ ಸಾಕ್ಷ್ಯ ಅಧಿನಿಯಮವೂ ಅನುಸರಿಸಿದೆ. ಆ ಅಧಿನಿಯಮದ 112ನೆಯ ಅಧಿನಿಯಮದ ಪ್ರಕಾರ ಗಂಡು-ಹೆಣ್ಣುಗಳು ನ್ಯಾಯಬದ್ಧ ಸತಿಪತಿಯರಾಗಿ ಇರುವ ಕಾಲದಲ್ಲಾಗಲಿ, ಅವರು ಒಂದು ವೇಳೆ ವಿವಾಹವಿಚ್ಛೇದ ಹೊಂದಿದ್ದ ಪಕ್ಷದಲ್ಲಿ ಆ ದಿನದಿಂದ ಇನ್ನೂರ ಎಂಬತ್ತು ದಿನಗಳ ಒಳಗೆ (ಆ ಅವಧಿಯಲ್ಲಿ ಅವಳು ಪುನರ್ ವಿವಾಹಮಾಡಿಕೊಳ್ಳದೆ ಇದ್ದಿದ್ದರೆ), ಆ ಹೆಣ್ಣಿಗೆ ಒಂದು ಶಿಶು ಜನಿಸಿದರೆ, ಆ ಶಿಶು ನ್ಯಾಯಬದ್ಧವಾಗಿ ಜನಿಸಿದ ಶಿಶು ಎನಿಸುತ್ತದೆ. ಆ ನ್ಯಾಯಬದ್ಧ ವಿವಾಹಿತರ ಪರಸ್ಪರ ಉಪಗಮನ (ಆಕ್ಸೆಸ್) ಅಸಾಧ್ಯವಾಗಿತ್ತೆಂದು ರುಜುವಾತು ಮಾಡದಿದ್ದ ಪಕ್ಷದಲ್ಲಿ ಮಗು ಜಾರಜ ಎನಿಸಿಕೊಳ್ಳದು.

ವಿವಾಹದ ವಿಚಾರದಲ್ಲಿ ಸತಿ ಧರ್ಮನಿಷ್ಠಳಾಗಿ ನಡೆಯುತ್ತಿದ್ದಳೆಂದು ನ್ಯಾಯಾಲಯ ಭಾವಿಸುತ್ತದೆ. ವಿವಾಹ ಊರ್ಜಿತವಿರುವ ಕಾಲದಲ್ಲಿ ಹುಟ್ಟಿದ ಶಿಶು ನ್ಯಾಯಬದ್ಧವಾಗಿ ಜನಿಸಿದ ಶಿಶು. ಅದು ನ್ಯಾಯಬದ್ಧವಾಗಿ ಪತಿಗೆ ಜನಿಸಿದ ಶಿಶುವಲ್ಲವೆಂದು ತೀರ್ಮಾನಿಸಬೇಕಾದರೆ ವ್ಯತಿರಿಕ್ತವಾದ, ನ್ಯಾಯವಾದ, ಒಪ್ಪತಕ್ಕ ಸಾಕ್ಷ್ಯ ಬೇಕು. ಶಿಶುವಿನ ಜನನ ಕಾನೂನುಬದ್ಧವೇ ಅಲ್ಲವೇ ಎಂಬುದನ್ನು ನಿರ್ಣಯಿಸುವಾಗ, ಗರ್ಭಧಾರಣೆಯ ಸಮಯದಲ್ಲಿ ಸತಿಗೆ ವಿವಾಹವಾಗಿತ್ತೋ ಇಲ್ಲವೋ? ಮದುವೆಯಾದ ಆರು ತಿಂಗಳಲ್ಲಿ ಮಗು ಜನಿಸಿತೆ ?-ಎಂಬ ಅಂಶಗಳನ್ನು ವಿಚಾರಿಸುವುದು ಅನಗತ್ಯವೆಂದು ಲಾಹೋರಿನ ಉಚ್ಚ ನ್ಯಾಯಾಲಯ ತೀರ್ಮಾನಿಸಿದೆ. ಮುಸ್ಲಿಂ ಸತಿಪತಿಯರು ನ್ಯಾಯಬದ್ಧ ವಿವಾಹವಾದ ಅನಂತರ ಆರು ತಿಂಗಳಲ್ಲಿ ಜನಿಸಿದ ಶಿಶು ನ್ಯಾಯಬದ್ಧ ಜನನ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯ ಹೇಳಿದೆ. ಶಿಶು ತನಗೆ ಜನಿಸಿದ್ದಲ್ಲವೆಂದು ಪತಿ ಸಾಧಿಸಬೇಕಾದ ಪಕ್ಷದಲ್ಲಿ, ತನ್ನಿಂದ ಆ ಶಿಶು ತನಗೆ ಜನಿಸಲು ಅಸಾಧ್ಯವೆಂಬುದಕ್ಕೆ ಅವನು ಸರಿಯಾದ ಪ್ರಮಾಣಗಳನ್ನು ಕೊಡಬೇಕು. ಗರ್ಭದಾನ ಸಮಯದಲ್ಲಿ ಪತಿ ಬಂಧನದಲ್ಲಿದ್ದರೆ, ಪತ್ನಿಯ ಅನೈತಿಕ ವ್ಯವಹಾರದಿಂದ ಜಿಗುಪ್ಸೆ ಹೊಂದಿ ಅವಳನ್ನು ಮುಟ್ಟದೆ ಅವನು ದೂರ ವಾಸವಾಗಿದ್ದರೆ ಪತಿ ಆ ಬಗ್ಗೆ ಸಾಕ್ಷ್ಯವನ್ನು ಒದಗಿಸಬಹುದು. ತಾನು ಇಂಥವರ ಮಗನೆಂದು ಒಬ್ಬ ವ್ಯಕ್ತಿ ಸಾಧಿಸುವಾಗ, ಅವರೊಳಗೆ ನ್ಯಾಯಬದ್ಧವಾದ ವಿವಾಹವಾಗಿದೆಯೆಂದು ಅವನು ಸಾಧಿಸಿದರೆ ಸಾಕು. ಆದರೆ ಒಂದು ಸಮಾಜದಲ್ಲಿ ನ್ಯಾಯಬದ್ಧ ವಿವಾಹ ಮತ್ತು ಜನನಗಳಂತೆಯೇ ನ್ಯಾಯಬದ್ಧವಲ್ಲದ ಜನನಗಳು ಅಧಿಕ ಸಂಖ್ಯೆಯಲ್ಲಿದ್ದರೆ ಶಿಶುವಿನ ನ್ಯಾಯಬದ್ಧ ಜನನವನ್ನು 112ನೆಯ ಪ್ರಕರಣದಿಂದ ತೀರ್ಮಾನಿಸುವುದು ಸರಿಯಲ್ಲ. ಅಂಥ ಸಂದರ್ಭದಲ್ಲಿ ಶಿಶುವಿನ ನ್ಯಾಯಬದ್ಧ ಜನನವನ್ನು ಬೇರೆ ಪುರಾವೆಗಳಿಂದ ತೀರ್ಮಾನಿಸತಕ್ಕದ್ದೆಂದೂ ನ್ಯಾಯಾಲಯದಲ್ಲಿ ತೀರ್ಪಾಗಿದೆ.

ವಿವಾಹ ನ್ಯಾಯಬದ್ಧವಾದ್ದಾಗಿರಬೇಕೆಂಬುದು ಮುಖ್ಯವಾಗಿ ಗಮನಿಸಬೇಕಾದ ಅಂಶ. ವಂಚನೆಯ ಫಲವಾದ ವಿವಾಹ ಮದುವೆಯಲ್ಲ. ಒಬ್ಬಾಕೆ ಒಬ್ಬಾತನನ್ನು ಮದುವೆಯಾಗುವ ಮುನ್ನವೇ ಇನ್ನೊಬ್ಬನಿಂದ ಗರ್ಭಿಣಿಯಾಗಿದ್ದು, ಅದು ಆತನಿಗೆ ತಿಳಿಯದೆ ವಂಚಿತನಾಗಿ ಅವನು ಆಕೆಯನ್ನು ವಿವಾಹವಾಗಿದ್ದರೆ ಅದು ಸಿಂಧುವೆನಿಸದು. ಆಕೆಯ ಗರ್ಭದಲ್ಲಿ ಆಗ ಹುಟ್ಟಿದ ಶಿಶು ಆತನದಾಗದು. ಮೊದಲನೆಯ ವಿವಾಹದಿಂದ ಕಾನೂನುಬದ್ಧವಾಗಿ ವಿಚ್ಛೇದ ಹೊಂದದಿದ್ದ ಒಬ್ಬ ಹೆಂಗಸು ಇನ್ನೊಬ್ಬನನ್ನು ಮದುವೆಯಾದರೆ, ಎರಡನೆಯ ವಿವಾಹದಲ್ಲಿ ಜನಿಸಿದ ಶಿಶು ನ್ಯಾಯಬದ್ಧವಾಗಿ ಜನಿಸಿದ ಶಿಶುವಾಗದು. ಗಂಡುಹೆಣ್ಣು ಅನೇಕ ವರ್ಷಗಳಿಂದ ಸತಿಪತಿಯರಂತೆ ಒಟ್ಟಿಗೆ ಇದ್ದಲ್ಲಿ ಅವರು ಕ್ರಮಬದ್ಧವಾಗಿ ವಿವಾಹವಾಗಿರುವರೆಂದು ನ್ಯಾಯಾಲಯ ತರ್ಕಿಸುತ್ತದೆ. ಅದನ್ನು ಉಪಪತ್ನಿತ್ವವೆಂದು (ಕಾಂಕ್ಯೂಬಿನೇಜ್) ನ್ಯಾಯಾಲಯ ಸ್ವೀಕರಿಸದು. ಆದರೂ ಅನೇಕ ವರ್ಷಗಳ ಉಪಪತ್ನಿತ್ವ ಪತ್ನಿತ್ವವಾಗಲಾರದು. ಅನೇಕ ವರ್ಷಗಳ ಕಾಲ ಸತಿಪತಿಯರಂತೆ ಇದ್ದವರನ್ನು ಸತಿಪತಿಯರೆಂದು ತರ್ಕಿಸಬಹುದಾದರೂ ಹೆಣ್ಣು ಆದಿಯಲ್ಲಿ ಜಾರಿಣಿಯ ಜೀವನ ನಡೆಯಿಸುತ್ತಿದ್ದ ಪಕ್ಷದಲ್ಲಿ ಈ ತರ್ಕ ಸರಿಯಲ್ಲ. ಪತ್ನಿ ಮೊದಲ ಪತಿಯಿಂದ ವಿಚ್ಛೇದ ಹೊಂದಿ ಎರಡನೆಯ ಮದುವೆಯಾದ ಬಳಿಕೆ ಅವಳಿಗೆ ಮಗು ಜನಿಸಿದಲ್ಲಿ ಸಾಮಾನ್ಯವಾಗಿ ಅದು ಎರಡನೆಯ ಪತಿಯ ಮಗುವೆಂದು ತಿಳಿಯಬೇಕು. ಗರ್ಭಧಾರಣೆಯ ಸಮಯದಲ್ಲಿ ಪತ್ನಿಯೊಂದಿಗೆ ಉಪಗಮನಕ್ಕೆ ಎರಡನೆಯ ಪತಿಗೆ ಅವಕಾಶ ಇರಲಿಲ್ಲವೆಂದು ತೋರಿಸದಿದ್ದಲ್ಲಿ ಅದು ಎರಡನೆಯ ಪತಿಯ ಮಗನೆಂದೇ ತಿಳಿಯತಕ್ಕದ್ದು.

ಮಗು ನ್ಯಾಯಬದ್ಧವಾಗಿ ಜನಿಸಿದ್ದಲ್ಲವೆಂದು ನಿರ್ಣಯಿಸಬೇಕಾದರೆ ಪತ್ನಿಯೊಂದಿಗೆ ಉಪಗಮನಕ್ಕೆ ಪತಿಗೆ ಎಡೆಯಿರಲಿಲ್ಲವೆಂದು ತೋರಿಸುವುದು ಅವಶ್ಯ. ವೈವಾಹಿಕ ಜೀವನ ಕಾಲದಲ್ಲಿ ಹುಟ್ಟಿದ ಮಗು ತನ್ನದಲ್ಲವೆಂದು ವಾದಿಸುವವನು ಅದನ್ನು ಸಾಧಿಸಲು ಬಲವತ್ತರವಾದ ಪ್ರಮಾಣ ನೀಡಬೇಕು. ಮಗು ಅವನದಲ್ಲವೆಂದು ಆ ಪ್ರಮಾಣದಿಂದ ನಿಸ್ಸಂಶಯವಾಗಿ ನಿರ್ಣಿತವಾಗಬೇಕು. ಪತ್ನಿ ದುರ್ನಡತೆಯವಳಾಗಿದ್ದಳೆಂದು ತೋರಿಸಿದರಾಗಲಿ, ಪತಿ ಆಗಿಂದಾಗ ಸ್ವಲ್ಪಕಾಲ ಪರಸ್ಥಳದಲ್ಲಿ ವಾಸವಾಗಿದ್ದನೆಂಬುದಕ್ಕೆ ಸಾಕ್ಷ್ಯ ಇದ್ದರಾಗಲಿ ಪತ್ನಿಗೆ ಹುಟ್ಟಿದ ಮಗು ಜಾರಜ ಎಂದು ಹೇಳಲು ಸಾಕಾಗದು.

ಒಬ್ಬ ಹೆಂಗಸು ಮತ್ತು ಗಂಡಸು ಪತಿಪತ್ನಿಯರಂತೆ ಬಾಳಿದ್ದು, ಅವಳಿಗೆ ಹುಟ್ಟಿದ ಮಕ್ಕಳು ತನ್ನವೆಂದೇ ಅವನು ವ್ಯವಹರಿಸಿದ್ದರೆ, ಆತ ಸತ್ತ ಬಳಿಕ ಆ ಮಕ್ಕಳು ಅವನದಲ್ಲವೆಂದು ಹೇಳಲು ಸಾಧ್ಯವಿಲ್ಲ. ಮಹಮ್ಮದೀಯ ನ್ಯಾಯದಲ್ಲಿ ಒಂದು ಮಗು ತನಗೆ ಜನಿಸಿದ್ದೆಂದು ಒಬ್ಬಾತ ಒಪ್ಪಿದರೆ, ಮಗುವಿನ ತಾಯಿಗೂ ಅವನಿಗೂ ವಿವಾಹವಾಗಿದೆಯೆಂದು ಮಹಮ್ಮದೀಯ ನ್ಯಾಯಾಲಯದಲ್ಲಿ ರುಜುವಾತಾಗುತ್ತದೆ.

ಆಸ್ತಿಯ ಹಕ್ಕು: ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಜಾತಿಗಳಲ್ಲಿ ಜಾರಜನಿಗೆ ತಂದೆಯ ಆಸ್ತಿಗೆ ಉತ್ತರಾಧಿಕಾರ ಬರುವುದಿಲ್ಲ. ಅವನಿಗೆ ಜೀವನಾಂಶಕ್ಕೆ ಮಾತ್ರ ಹಕ್ಕಿರುತ್ತದೆ. ಆದರೆ ಶೂದ್ರರಲ್ಲಿ ಮಗು ಸ್ಥಿರವಾಗಿ ಇಟ್ಟುಕೊಂಡ ಹೆಂಗಸಿನಲ್ಲಿ ಜನಿಸಿದ್ದರೆ, ಹೆಂಗಸು ಹಿಂದುವಾಗಿದ್ದರೆ, ಧರ್ಮದ ಅನ್ವಯ ಮದುವೆಯಾಗಲು ಅಸಾಧ್ಯವಿರುವ ರಕ್ತ ಸಂಬಂಧಿಯಲ್ಲಿ ಜನಿಸಿದ್ದರೆ, ಸಾಮಾನ್ಯವಾಗಿ ಆ ಮಗುವಿಗೆ ತಂದೆಯ ಆಸ್ತಿಯಲ್ಲಿ ಉತ್ತರಾಧಿಕಾರದ ಹಕ್ಕಿರುತ್ತದೆ. ಇದು ಹಿಂದೂ ನ್ಯಾಯದ ಸಾಮಾನ್ಯ ನಿಯಮ. ಒಬ್ಬನಿಗೆ ಜಾರಜಸಂತಾನವಿದ್ದು, ಅವನಿಗೆ ಸಾಕಷ್ಟು ಜೀವನಾನುಕೂಲ ಇದ್ದರೆ, ಜಾರಜ ಸಂತಾನಕ್ಕೆ ಅವನು ನಿಗದಿಯಾದ ಜೀವನಾಂಶ ಕೊಡಬೇಕೆಂದು ವಿಧಿಸುವ ಅಧಿಕಾರ ದಂಡ ಪ್ರಕ್ರಿಯಾ ಸಂಹಿತೆಯ ಪ್ರಕಾರ ಅದಕ್ಕೆ ಏರ್ಪಡಿಸಲಾದ ನ್ಯಾಯಾಲಯಗಳಿಗೆ ಇರುತ್ತದೆ. ಮಹಮ್ಮದೀಯರಲ್ಲಿ ಸುನ್ನಿ ಕಾನೂನು ಪ್ರಕಾರ ತಾಯಿಗೂ ಜಾರಜ ಸಂತಾನಕ್ಕೂ ಪರಸ್ಪರ ಆಸ್ತಿಯಲ್ಲಿ ಉತ್ತರಾಧಿಕಾರದ ಹಕ್ಕುಂಟು. ಷಿಯಾ ಕಾನೂನಿನಲ್ಲಿ ಜಾರಜನಿಗೆ ಉತ್ತರಾಧಿಕಾರದ ಹಕ್ಕು ಇಲ್ಲ. ಸುನ್ನಿ ಕಾನೂನಿನ ಪ್ರಕಾರವು ಜಾರಜನಿಗೆ ತಂದೆಯ ಆಸ್ತಿಯಲ್ಲಿ ಹಕ್ಕುಬರುವುದಿಲ್ಲ.										(ಕೆ.ಜಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ